ಗುರುಕುಲ - ಬೆಕ್ಕಿನ ಕೊರಳಿಗೆ ಗಂಜಿ

ಗುರುಕುಲ



ಅಂದು ಆ ಗ್ರಾಮದ ಚಾವಡಿಯ ಮುಂದೆ ಕಿಕ್ಕಿರಿದು ಜನ ಕೂಡಿದ್ದರು. ತಮ್ಮ ಊರಿಗೆ ಎಂದೂ ಬಾರದ ಎಂದೂ ನೋಡದ ದೊಡ್ಡ ಸಾಹೇಬರು ಬಂದಿದ್ದರು. ಅವರು ಕಂದಾಯ ಇಲಾಖೆಯ ಮುಖ್ಯಾಧಿಕಾರಿಗಳು. ಕೆಂಪು ಮುಖದ ಆಂಗ್ಲ ಅಧಿಕಾರಿಗಳನ್ನು ನೋಡುವುದೊಂದು ಹಬ್ಬವೇ ಆಗಿಬಿಟ್ಟಿತ್ತು. ಚಾವಡಿಯ ಮುಂದೆ ಊರಿಗೆ ಊರೇ ನೆರೆದಂತಾಗಿತ್ತು. ಒಳಗಡೆ ಸಾಹೇಬರು ತಪಾಸಣೆಯ ಕಾರ್ಯದಲ್ಲಿ ತೊಡಗಿದ್ದರು. ಅದೇಕೋ ಅವರ ಲಕ್ಷ್ಯ ಬೀದಿಯ ಕಡೆಗೆ ಹರಿಯಿತು.

ಚಾವಡಿಯ ಮುಂದಿನ ರಸ್ತೆಯಲ್ಲಿ ಯಾರೋ ಒಬ್ಬ ಯಜಮಾನರು ನಡೆದು ಹೊರಟಿದ್ದರು. ಅವರು ಬಲು ಶುಭ್ರವಾದ ಬಟ್ಟೆ ಉಟ್ಟಿದ್ದರು. ನೀಟಾದ ಅಂಗಿ ಕೋಟು ತೊಟ್ಟಿದ್ದರು. ತಲೆಗೆ ರುಮಾಲು, ಕೈಯಲ್ಲಿ ಬೆತ್ತ, ಹೆಗಲ ಮೇಲೆ ಬೆಳ್ಳನೆಯ ಶೆಲ್ಯ ಇತ್ತು. ಅವರ ಗಂಭೀರವಾದ ನಡಿಗೆ ಎಂಥವರ ಗಮನ ಸೆಳೆಯುವಂತಿತ್ತು. ಕೂಡಲ ಸಂಗಯ್ಯನ ತೇರು ಎಳೆದಂಗ ಎನ್ನುವ ಹಾಗೆ ರಸ್ತೆಗೆ ಶೋಭೆ ತರುವಂತೆ ಅವರು ನಿಧಾನವಾಗಿ ಬರುತ್ತಿದ್ದರು. ಅವರನ್ನು ಕಾಣುತ್ತಲೇ ಅಕ್ಕಪಕ್ಕದ ಕಟ್ಟೆಯ ಮೇಲೆ ಕುಳಿತವರೆಲ್ಲ ತಟ್ಟನೆ ಎದ್ದು ನಿಂತರು. ಕರ ಮುಗಿದು ಶಿರಬಾಗಿ ಅವರಿಗೆ ಗೌರವದಿಂದ ವಂದಿಸತೊಡಗಿದರು. ಆ ಯಜಮಾನರು ಮಾತ್ರ ಯಾರೊಡನೆಯೂ ನಿಂತು ಮಾತನಾಡದೆ ಶರಣು! ಶರಣು!! ಎನ್ನುತ್ತ ಮುಗುಳು ನಗೆ ಸೂಸುತ್ತ, ಸಾವಕಾಶವಾಗಿ ಮುಂದೆ ಮುಂದೆ ಹೋಗಿಬಿಟ್ಟರು.

ಅದನ್ನೆಲ್ಲ ನೋಡಿದ ಆ ಆಂಗ್ಲ ಸಾಹೇಬರು ಕ್ಷಣ ಕಾಲ ಚಾವಡಿಯಲ್ಲಿ ದಂಗಾಗಿ ಕುಳಿತರು. ಇವನಾರೋ ದೊಡ್ಡ ಕುಳ ಇದ್ದಿರಬೇಕೆಂದು ಅವರಿಗೆ ಅನ್ನಿಸಿತು. ಇವನಾವ ಪಾಳೆಯಗಾರ ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡು ಕೊಂಕು ಮಾತಿನಿಂದ ಕೇಳಿದರು, ಸಾಹೇಬರೇ ! ಅವರು ಪಾಳೆಗಾರರು ಅಲ್ಲ! ಪಟ್ಟೇದಾರರೂ ಅಲ್ಲ!! ಅವರು ನಮ್ಮೂರಿನ ಶಾಲೆಯ ಮಾಸ್ತರರು! ಎಂದು ಒಳ್ಳೆಯ ಅಭಿಮಾನದಿಂದ ಹೇಳಿದರು. ಏನು? ಶಾಲಾ ಮಾಸ್ತರರಿಗೆ ಇಷ್ಟೊಂದು ಗೌರವವೇ ? ಎಂದು ಸಾಹೇಬರು ಚಕಿತರಾಗಿ ಕೇಳಿದರು. ದೊಡ್ಡ ಹುದ್ದೆಯಲ್ಲಿದ್ದ ನನಗೆ ಸಿಕ್ಕದ ಮರ್ಯಾದೆ ಬಡ ಶಾಲಾ ಮಾಸ್ತರರಿಗೆ ದೊರಕುವುದೇ ? ಎಂಬ ದುರಹಂಕಾರ ಅವರ ಮನದಲ್ಲಿ ಕಾಡಿರಬೇಕು! ಹೌದು ಸಾಹೇಬರೇ! ಅವರು ಹಾಗೇ ಇದ್ದಾರೆ. ಅವರು ಬರಿ ಶಿಕ್ಷಕರಲ್ಲ! ದಕ್ಷ ಶಿಕ್ಷಕರು, ವಿದ್ಯಾದಾನ ಮಾಡುವುದರಲ್ಲಿ ಅವರದು ಎತ್ತಿದ ಕೈ !! ಸದ್ಗುಣಿಗಳೂ ಆಗಿದ್ದಾರೆ ಎಂದು ಕರಣಿಕರು ಶಿಕ್ಷಕರ ಮೇಲಿದ್ದ ತಮ್ಮ ಮೆಚ್ಚುಗೆಯನ್ನು ಬಿಚ್ಚಿ ಹೇಳಿದರು. ಊರಿಗೆ ಊರೇ ತಲೆ ಬಾಗಬೇಕಾದರೆ ಇವರು ಉತ್ತಮ ಶಿಕ್ಷಕರಾಗಿರಲೇಬೇಕೆಂದು ಸಾಹೇಬರಿಗೆ ಮನವರಿಕೆಯಾಯಿತು. ಅಷ್ಟೇ ಅಲ್ಲ ಅವರ ಶಾಲೆಯನ್ನು ನೋಡುವ ಹಂಬಲವು ಅವರಿಗಾಯಿತು. ತಟ್ಟನೇ ಸೇವಕರನ್ನು ಶಾಲೆಗೆ ಕಳಿಸಿ ಶಾಲೆಗೆ ಯಾವಾಗ ಬರಬೇಕೆಂದು ಹೇಳಿ ಕಳಿಸಿದರು, ಶಾಲಾ ಅವಧಿಯಲ್ಲಿ ಬೇಕಾದಾಗ ಬಂದು ಭೆಟ್ಟಿಕೊಡಬಹುದು ! ಎಂದು ಶಿಕ್ಷಕರು ವಿನಯದಿಂದ ಹೇಳಿಬಿಟ್ಟರು.




ಉತ್ತಮ ಶಿಕ್ಷಕರು ಕೆಲಸ ಮಾಡುತ್ತಿರುವ ಶಾಲೆ ಹೇಗಿದ್ದಿರಬೇಕು ? ಎಂದು ಭಾರಿ ಕುತೂಹಲದಿಂದಲೇ ಎಲ್ಲ ಕೆಲಸಗಳನ್ನು ಬದಿಗಿಟ್ಟು ಅಧಿಕಾರಿಗಳು  ಹೊರಟೇಬಿಟ್ಟರು. ಶಾಲೆಯ ಪ್ರಶಾಂತ ವಾತಾವರಣವನ್ನು ನೋಡಿ ಸಾಹೇಬರ ಮನಸ್ಸು ಪ್ರಸನ್ನವಾಯಿತು. ಶಾಲೆಯನ್ನು ಒಳ ಹೊರಗೆ ಚೊಕ್ಕಟವಾಗಿರಿಸಿದ್ದರು. ಸ್ವಚ್ಛವಾದ ಆಟದ ಬಯಲು ದೊಡ್ಡದಾಗಿತ್ತು. ಸುತ್ತಲೂ ಹಚ್ಚ ಹಸಿರಾಗಿ ಬೆಳೆದ ಗಿಡಬಳ್ಳಿಗಳ ಅಂದ ಚಂದವನ್ನು ನೋಡಿ ಸಾಹೇಬರಿಗೆ ಗುರುಕುಲವನ್ನೇ ಹೊಕ್ಕಂತಾಗಿತ್ತು. ಎಲ್ಲ ಶಿಕ್ಷಕರು ಅಕ್ಕರೆಯಿಂದ ಪಾಠದಲ್ಲಿ ತೊಡಗಿದ್ದರು. ಬಣ್ಣ ಸುಣ್ಣಗಳಿಂದ ಸುಂದರವಾದ ಶಾಲೆ ಬಗೆ ಬಗೆಯ ಚಿತ್ರಪಟಗಳಿಂದ ಬಲು ಸುಂದರವಾಗಿತ್ತು. ಮಕ್ಕಳು ಉತ್ಸುಕರಾಗಿ ಆಟ ಪಾಠಗಳಲ್ಲಿ ತೊಡಗಿದರು. ನಿಜವಾಗಿಯೂ ಅಲ್ಲಿ ಅಕ್ಷರ ದಾಸೋಹದ ಜತೆಜತೆಗೆ ಜ್ಞಾನ ದಾಸೋಹವೇ ನಡೆದಂತಾಗಿತ್ತು. ಸಂತಸಗೊಂಡ ಸಾಹೇಬರು ಶಾಲೆಯ ಶರಾ ಪುಸ್ತಕದಲ್ಲಿ ಮುಕ್ತ ಮನಸ್ಸಿನಿಂದ ಹಿಂದೆ ಭಾರತ ದೇಶದಲ್ಲಿ ಗುರುಕುಲಗಳಿದ್ದವು. ಅಲ್ಲಿ ಋಷಿ ಮುನಿಗಳು ಶಿಷ್ಯರಿಗೆ ವಿದ್ಯಾದಾನ ಮಾಡುತ್ತಿದ್ದರು! ಎಂದು ಕೇಳಿದ್ದೆವು. ಇಂದು ಅಂಥ ಗುರುಕುಲವನ್ನು ಪ್ರತ್ಯಕ್ಷ ನೋಡಿ ಸಂತಸಪಟ್ಟೆ!! ಎಂದು ತಮ್ಮ ಮೆಚ್ಚುಗೆಯನ್ನು ದಾಖಲಿಸಿಬಿಟ್ಟರು. ಅವರು ಬರೆದ ಆ ಶಾಲೆಯ ಬಗ್ಗೆ ಎರಡೇ ಎರಡು ಮಾತುಗಳು ಇಂದಿಗೂ ಆ ಭಾಗದಲ್ಲಿಯೇ ಮನೆ ಮಾತಾಗಿಬಿಟ್ಟಿವೆ.

ಈ ಘಟನೆ ನಡೆದುದು ಇತಿಹಾಸ ಪ್ರಸಿದ್ಧ ವಿಜಾಪುರ ಜಿಲ್ಲೆ ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ. ಆ ಶಾಲೆಯಲ್ಲಿ ಆಗಿ ಹೋದ ಆದರ್ಶ ಶಿಕ್ಷಕರೇ ರೇವಣಸಿದ್ದಪ್ಪ ಮಾಸ್ತರರು. ಸಾತ್ವಿಕ ಸ್ವಭಾವದ ನೇರ ನಡೆನುಡಿಯ ಗೌರವಾನ್ವಿತ ಇವರು ಮನಗೂಳಿ ಗ್ರಾಮದ ಔರಸಂಗ ಮನೆತನಕ್ಕೆ ಸೇರಿದವರು. ಬಹುದಿನಗಳವರೆಗೆ ಅಥರ್ಗಾದಲ್ಲಿ ಆದರ್ಶ ಶಿಕ್ಷಕರಾಗಿ ದುಡಿದರು. ಶರಣ ಸ್ವಭಾವದ ಇವರು ಸಕಲರಿಗೂ ಮಾರ್ಗದರ್ಶಕರಾಗಿ ಗ್ರಾಮವನ್ನು ಸುಧಾರಿಸಿದರು. ಅಲ್ಲಿಯೇ ದಿವಂಗತರಾಗಿ ಇಂದಿಗೂ ಎಲ್ಲರಿಗೂ ಪೂಜ್ಯನೀಯರಾಗಿದ್ದಾರೆ. ಪ್ರತಿವರ್ಷ ಶ್ರಾವಣ ಮಾಸದಲ್ಲಿ ಅವರ ಜಯಂತಿ ಉತ್ಸವವನ್ನು ಆಚರಿಸುತ್ತಾರೆ. ಈಗವರ ಸಮಾಧಿಯ ಮೇಲೆ ಗದ್ದುಗೆಯನ್ನು ಕಟ್ಟಿ ನಿತ್ಯವು ಪೂಜಿಸುತ್ತಾರೆ. ಪ್ರತಿವರ್ಷ ಮಹಾಶಿವರಾತ್ರಿಯಲ್ಲಿ ಅವರ ಪುಣ್ಯಸ್ಮರಣೆಗಾಗಿ ಜಾತ್ರೆಯೂ ನಡೆಯುತ್ತದೆ. ಈ ರೀತಿ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಪೂಜೆಗೊಳ್ಳುತ್ತಿರುವುದು ನಾಡಿನಲ್ಲಿ ಅಪರೂಪ! ಅಂತೆಯೆ ಖ್ಯಾತ ಸಾಹಿತಿಗಳಾಗಿದ್ದ ಶಿಂಪಿ ಲಿಂಗಣ್ಣನವರು ರೇವಣಸಿದ್ದಪ್ಪ ಮಾಸ್ತರರನ್ನು ಕುರಿತು 'ಹಳ್ಳಿಯ ಮಹಾತ್ಮ' ಎಂಬ ಪುಸ್ತಕ ಬರೆದು ಪ್ರಕಟಿಸಿದರು. ಇಂಥ ಶಿಕ್ಷಕರನ್ನು ಕುರಿತೇ ಆಧುನಿಕ ಕವಿಯೊಬ್ಬರು

ಪ್ರಾಥಮಿಕ ಶಿಕ್ಷಕರು |
ರಾಷ್ಟ್ರದ ರಕ್ಷಕರು |
ಶ್ರೇಷ್ಠರು ಇವರು ಜಗದೊಳಗ !!

ಎಂದು ಎದೆತುಂಬಿ ಹಾಡಿದ್ದಾರೆ.

Popular posts from this blog

ಸುಖಕರ್ತ ದುಖಹರ್ತ / सुखकर्ता दुखहर्ता

ಆತ್ಮಾರಾಮ ಆನಂದ ರಮಣ / athma Rama Aanandha Ramana

ಮಂತ್ರ ಪುಷ್ಪಂ / Mantra Pushpam